ಅದೊಂದು ದಿನ ಶನಿವಾರ
ನಾನು ಚಿಕ್ಕಂದಿನಿಂದಲೂ ಪಟ್ಟಣದ ಕಾಂಕ್ರೀಟ್ ಕಾಡಿನ ಇಕ್ಕಟ್ಟಿನಲ್ಲಿ ಬೆಳದುದರಿಂದಲೋ ಏನೋ ಹಳ್ಳಿಗಳ ಬಗ್ಗೆ ಅಪಾರವಾದ ಒಲವು,ಕಾಳಜಿ ಕಾರಣ ಶಾಲೆಯಲ್ಲಿ ನನ್ನ ಪಕ್ಕದಲ್ಲಿ ಕೂರುತ್ತಿದ್ದ ಹಳ್ಳಿ ಹುಡುಗರು ಹೇಳುತ್ತಿದ್ದ ಬೆಟ್ಟದಲ್ಲಿ ಕುರಿಕಾಯುವಾಗ ಆದ ಅವರ ಅನುಭವಗಳು,ಅದರಲ್ಲಿಯೂ ಪ್ರಮುಖವಾಗಿ ಚಿಕ್ಕೇಗೌಡ.ಅವನು ವಣರ್ಿಸುತ್ತಿದ್ದರೆ ಆ ಮನಮೋಹಕವಾದ ಮೈಪುಳುಕಿತಗೊಳಿಸುವ ಪ್ರಕೃತಿಯ ವಿಸ್ಮಯ ಸೌಂದರ್ಯರಾಶಿಯು ಕಣ್ ಮುಂದೆಯೆ ಹರಿದಾಡುತ್ತಿರುವಂತೆ ಬಾಸವಾಗುತ್ತಿತು,ಪ್ರತಿನಿತ್ಯ ಶಾಲೆಯಲ್ಲಿ ಮಾಸ್ತರರ ಪಾಠವನ್ನು ಪಕ್ಕಕ್ಕೆ ತಳ್ಳಿ ಊಹಾಲೋಕದ ಬೆಟ್ಟಗಳಲ್ಲಿ ಕುರಿಕಾಯುತ್ತಾ ಕಾಲ ಕಳೆಯುತ್ತಿದ್ದೆ ಅದೊಂದು ದಿನ ಶನಿವಾರ ಶಾಲೆ ಮುಗಿದ ನಂತರ ಹಳ್ಳಿ ಸ್ನೇಹಿತರ ಕೈಕಾಲು ಹಿಡಿದು ಕಾಡಿಬೇಡಿ ಒಪ್ಪಿಸಿ ಸೈಕಲ್ಲನ್ನೇರಿ ಅವರೊಟ್ಟಿಗೆ ಹಳ್ಳಿಯನ್ನು ನೋಡಲು ಸೈಕಲ್ಚೈನಿನ ಕರಕರ ಕರ್ಕಶ ಶಬ್ದದ ಸಮೇತ ಹಳ್ಳಿಗೆ ಹೊರಟೆ.ಹಳ್ಳಿ ಸಮೀಪಿಸುತ್ತಲೇ ಬಾನೆತ್ತರದ ಬೃಹದಾಕಾರದ ಆಲದ ಮರಗಳು ದಣಿದ ನಮಗೆ ಛತ್ರಿಯನ್ನು ಹಿಡಿದರೆ ಹಕ್ಕಿಗಳು ಸುಮದುರ ಇಂಚರದ ಮಂಗಳವಾದ್ಯಗಳೊಂದಿಗೆ ವೈಭವಯುತ ಸ್ವಾಗತವನ್ನು ಬಯಸಿದವು,ಎತ್ತ ನೋಡಿದರು ಹಸಿರೇ ಹಸಿರು ಆ ಹಸಿರಿನ ಆಸ್ವಾದನೆಯಿಂದಲೋ ಏನೋ ದಣಿದ ದೇಹದ ಹಸಿವು ಹಾರಿ ಹೋಯಿತು ಹೊಸಲೋಕಕ್ಕೆ ಪಾದಾರ್ಪಣೆ ಮಾಡಿದಂತಾಗಿ ಉಲ್ಲಾಸಗೊಂಡ ಮನವು ಹಕ್ಕಿಗಳನ್ನು ಹಿಂಬಾಲಿಸುತ್ತಾ ಆಗಸದಲ್ಲಿ ಹಾರತೊಡಗಿತು ನನ್ನ ಗೆಳೆಯರ ಕೇರಿಯಂತು ಇಂದ್ರನ ಅಮರಾವತಿಯಂತೆ ಕಾಣತೊಡಗಿತು ಸಣ್ಣ ರಸ್ತೆಯ ಎರಡೂ ಬದಿಯಲ್ಲಿದ್ದ ಪುಟಾಣಿ ಗುಡಿಸಿಲುಗಳು ಅದರ ಅಂಗಳದಲ್ಲಿ ತಾಯ ಹಾಲ ಕುಡಿಯುತ್ತಾ ಯಾರೀ ಹೊಸ ಅತಿಥಿಯೆಂಬಂತೆ ನನ್ನನೊಮ್ಮೆ ನೋಡಿ ಪುನಃ ತಾಯ ಕೆಚ್ಚಲಿಗೆ ಬಾಯಿಹಾಕಿದ ಮೇಕೆಯ ನೋಟ,ಹತ್ತಾರು ಕುರಿಗಳ ಹಿಂಡು,ಬಾಯನ್ನು ಜಗಿಯುತ್ತಾ ಅಂಬಾ ಬಾಗೆಳೆಯ ಎಂದು ಕೂಗಿದ ದನಕರುಗಳು, ಮೈಮರೆತು ಸಮ್ಮೋಹನಕ್ಕೊಳಗಾಗಿರಲು,ಕಾಲ ಬೆರಳನು ಕುಟುಕಿದ ಅನುಭವವಾಗಿ ನೋಡಲು ಮೊಟ್ಟೆಯಷ್ಟೇ ಗಾತ್ರದ ಮುದ್ದಾದ ಕರಿ,ಬಿಳಿ,ಕಂದು,ಹಳದಿ ಬಣ್ಣದ ಕೋಳಿಮರಿಗಳು.ಭಯವಿಲ್ಲದೇ ಕಾಲ ಮೇಲೆ ಹಾರಿದ ಪುಟಾಣಿ ಮರಿಯನ್ನು ಚಂಗನೆ ಹಿಡಿದೆ. ಅದು ಏರುದ್ವನಿಯಲ್ಲಿ ಕೀವ್ ಕೀವ್ ಗುಟ್ಟಾಗ ಅದರ ಆಂತರ್ಯ ಅರಿಯದೆ ಬೆಪ್ಪನಂತೆ ಹಾಗೆಯೆ ಮೂಕವಿಸ್ಮಿತನಾಗಿ ನೋಡುನೋಡುತ್ತಿದಂತೆ ಒಮ್ಮಲೆ ಹಾರಿ ಬಂದ ತಾಯಿ ಕೋಳಿ ನನ್ನ ಮೇಲೆ ಯುದ್ಧವನ್ನು ಅದಾಗಲೇ ಸಾರಿಆಗಿತ್ತು. ಬೆಂಕಿಯ ಚೆಂಡಿನಂತೆ ನನ್ನ ಮೈಮೇಲೆ ಹಾರಿ ಹಾರಿ ಕುಟುಕತೊಡಗಿತು ಮರಿಯನ್ನು ಅಲ್ಲಿಯೇ ಬಿಸುಟು ಓಡಲು ಶುರುಮಾಡಿದೆ, ಆದರೂ ಬಿಡದಂತೆ ನನ್ನ ಬೆಂಬೆತ್ತಿ ಅಟ್ಟಾಡಿಸಿಬಿಟ್ಟಿತು ನನ್ನ ಗೆಳೆಯರಂತೂ ಪುಕ್ಕಟೆ ಶೋ ನೋಡುತ್ತಾ ಹೊಟ್ಟೆ ಹುಣ್ಣಾಗುವಂತೆ ನಕ್ಕರು,ಆ ಕ್ಷಣದಲ್ಲಿ ಆ ಮರಿಯು ನನ್ನ ಕೈಯಿಂದ ತಪ್ಪಿಸಿಕೊಂಡರೂ ನನ್ನ ಮನದಾಳದ ಜೈಲಿನಲ್ಲಿ ಶಾಶ್ವತ ಕೈದಿಯಂತೆ ಬಂದಿಯಾಯಿತು.ಅಲ್ಲಿಂದ ಕಾಲ್ಕಿತ್ತು ಕೆರೆಯ ಕಡೆ ಹೊರಟೆವು ಹಳ್ಳಿಯ ಪಡ್ಡೆ ಹುಡುಗರೆಲ್ಲರೂ ಪುಟಗೋಸಿಯನು ಕಟ್ಟಿಕೊಂಡು ಬಿಸಿಲ ಝಳುಪಿನಿಂದ ಪಾರಾಗಲು ಕೆರೆಯ ಮೊರೆ ಹೊಕ್ಕಿದ್ದರು ಆಳ ಅಗಲ ಉದ್ದಳತೆಗಳ ಲೆಕ್ಕಾಚಾರಹಾಕದೇ ಓಡಿ ಹೋಗಿ ಕೆರೆಯಲ್ಲಿ ಬಿದ್ದೆ ನನ್ನ ಅದೃಷ್ಟಕ್ಕೆ ಆಳವಿರಲಿಲ್ಲ ಆಶ್ಚರ್ಯಚಕಿತರಾದ ಗೆಳೆಯರು ಈಜು ಬರುತ್ತದ? ಎಂದು ಪ್ರಶ್ನಿಸಿದಾಗ ಇಲ್ಲವೆಂಬ ಸಹಜ ಉತ್ತರ ಮತ್ತಿನ್ಯಾವ ಧೈರ್ಯದಿಂದ ದುಮುಕಿದೆ ಎಂದು ನನ್ನಲ್ಲೇ ಪ್ರಶ್ನೆ ಮೂಡಿತು. ಬಹುಶಃ ಜೊತೆಯಲ್ಲಿರುವ ಗೆಳೆಯರ ಮೇಲಿನ ಬರವಸೆಯಿಂದಾಗಿರಬಹುದು ಒಟ್ಟಾರೆ ಎಮ್ಮೆಗಳೂ ನಾಚುವಂತೆ ಹೊರಳಾಡುತ್ತಾ ಸ್ವರ್ಗಕ್ಕೆ ನಾಲ್ಕೇಗೇಣಿನ ಅಂತರದಲ್ಲಿರುವ ಅನುಭವ ,ಸಮಯ ಕಳೆದದ್ದೇ ಅರಿಯದೆ ಕೆರೆಯ ಮಡಿಲಲ್ಲಿ ಮಿಂದೆದ್ದೆ ಅದಾಗಲೇ ಗೋದೋಳಿ ಸಮಯವಾದ್ದರಿಂದ ತೋಟಕ್ಕೆ ಹೋಗಿ ಮೇಯಲು ಬಿಟ್ಟಿದ್ದ ದನಕರುಗಳನ್ನು ಹಿಡಿದು ತಂದು ಮನೆಯಂಗಳದಲ್ಲಿ ಕಟ್ಟಿಹಾಕಿ ಹಸಿಹುಲ್ಲನು ಅವುಗಳ ಮುಂದೆ ಚೆಲ್ಲಿದೆವು. ಅದಾಗಲೇ ಕರ್ತವ್ಯಕ್ಕೆ ಸಿದ್ದನಾಗಿ ತೆರೆಯ ಮೇಲೆ ಮಿಂಚಲು ಹಾತೊರೆಯುತಿರುವ ಪಾತ್ರದಾರಿಯಂತೆ ಚಂದಮಾಮನು ತೆರೆಯನು ಸ್ವಲ್ಪ ಪಕ್ಕಕ್ಕೆ ಸರಿಸಿ ಸಮಯವಾಯಿತೆಂಬ ಎಚ್ಚರಿಕೆಯನು ಕೊಟ್ಟಿದ್ದನು.ಕುಪಿತಗೊಂಡ ಸೂರ್ಯನು ಕೆಂಗಣ್ಣಿನಿಂದ ದುರುಗುಟ್ಟಿ ನೋಡುತ್ತಲೇ ಶಶಿರನನ್ನು ಸ್ವಾಗತಿಸಿ ತೆರೆಹಿಂದೆ ಮರೆಯಾದನು,ಸಾರಾಯಿ ಕುಡಿದವನಂತೆ ಮತ್ತಿನಲ್ಲಿ ತೂಗಾಡುತ್ತಿದ್ದ ನನ್ನ ಬೆನ್ನಿಗೆ ಕತ್ತಲಿನ ಫಳ್ ಎಂಬ ಚಾಟಿ ಏಟು ಬಿದ್ದಾಗಲೇ ನನಗೆ ಇಹದ ನೆನಪಾಗಿದ್ದು .ಕೂಡಲೇ ನನಗೆ ನೆನಪಾದದ್ದು ನನ್ನ ಮನೆ,ಅಮ್ಮ ತಕ್ಷಣ ಭಯದಿಂದ ಏದುಸಿರು ಬಿಡುತ್ತಾ ಸೈಕಲ್ಲನ್ನು ತುಳಿಯುತ್ತಾ ಮನೆಕಡೆಗೆ ಹೊರಟೆ ಭಯದಿಂದ ನಡುಗುತ್ತಲೇ ಮನೆಗೆ ಹೋದೊಡನೆಯೇ ಎದುರಿಸಬೇಕಾದ ಆಪತ್ಕ್ಷಣಗಳನ್ನು ಮೆಲುಕುಹಾಕುತ್ತಾ,ಹೆದರುತ್ತಾ ,ಪರಿಹಾರೋಪಾಯವಾದ ಸುಳ್ಳು ಕಥೆಗಳನ್ನು ಮನಸಲ್ಲೇ ಕಟ್ಟುತ್ತಾ ತಡವರಿಸುತಿರಲು ಇದ್ಯಾವುದರ ಪರಿವೇ ಇಲ್ಲದ ಕಾಲುಗಳು ಯಾಂತ್ರಿಕವಾಗಿ ಗಾಣಕ್ಕೆ ಕಟ್ಟಿದ ಎತ್ತಿನಂತೆ ಫೆಡಲ್ ಅನ್ನೇ ಹಿಂಬಾಲಿಸುತ್ತಾ ಸುತ್ತು ಹಾಕುತ್ತಿತ್ತು ಮಾರ್ಗ ಮದ್ಯದಲ್ಲಿ ಯಾವ ಗಾಡಿ ಬಂದರು ಅಪ್ಪನದೇ ಇರಬಹುದೇನೊ ಎಂಬ ಆತಂಕ ಮನೆಯು ಸಮೀಪಿಸಿದಂತೆಲ್ಲಾ ಹಳ್ಳಿಯು ದೂರವಾಗುತ್ತಿತ್ತು.ಆದರೆ ಆ ದಿನದ ನೆನಪುಗಳು ಮಾತ್ರ ಮನಸ್ಸಿಗೆ ಹತ್ತಿರವಾಗಿಯೆ ಇತ್ತು,ಆಕಸ್ಮಿಕವಾಗಿ ತಲೆ ಎತ್ತಿ ಚಂದಿರನನ್ನು ಕಂಡಾಗ ಮನೆಗೆ ಹೋಗು ನಿನಗಾಗಿ ಬಿಸಿ ಬಿಸಿ ಕಜ್ಜಾಯ ಕಾದಿದೆ ಎಂದು ಅಣುಕಿಸುವಂತೆ ಹಲ್ಲು ಕಿಸಿದು ನೋಡುತ್ತಿದ್ದ.ಬೀದಿಗೆ ಹೋದೊಡನೆ ಅಚಾನಕ್ಕಾಗಿ ಎದುರಾದ ಗೆಳೆಯನೊಬ್ಬ ಎಲ್ಲೋ ಹೋಗಿದ್ದೆ ನಿಮ್ಮಮ್ಮ ನಿನ್ನ ಹುಡುಕಿಕೊಂಡು ನಮ್ಮ ಮನೆಗೆ ಬಂದಿದ್ದರು ಒದೆ ಬೀಳ್ತಾವೆ ಹೋಗು ಎಂದಾಗ ಎದೆ ಒಡೆದುಹೋಗುವಂತೆ ಕಿವಿಯನು ಮುತ್ತಿದ ಲಬ್ ಡಬ್ ಶಬ್ಧ ಬಹುದೂರದಿಂದಲೇ ಮನೆಯಕಡೆ ತೀಕ್ಷವಾಗಿ ನೋಡಿದಾಗ ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಾ ಬಾಗಿಲಲ್ಲೆ ಲಟ್ಟಣಿಗೆ ಸಮೇತ ಕಾದು ನಿಂತಿದ್ದ ನನ್ನಮ್ಮ,ಸಾಕ್ಷಾತ್ ದುಗರ್ಾಮಾತೆಯ ಪ್ರತಿರೂಪದಂತೆ ಕಂಡಳು ಮನೆಗೆ ಹೋದೊಡನೆ ಎಲ್ಲೋ ಹೋಗಿದ್ದೆ ಬೇವಸರ್ಿ ಎಂದು ಅಬ್ಬರಿಸಿದಾಗ ಸುಳ್ಳಿನ ಮೂಟೆಯನ್ನು ಕೆಡವಿ ಒಂದನ್ನು ಆಯ್ಕೆ ಮಾಡಿ ಬೊಗಳುವ ಮುನ್ನವೇ ಪಟ್ ಪಟಾ,ದಪ್ ದಪಾ,ದಮ್ ದಮಾ,ಎಂಬ ಹತ್ತಾರು ವಾದ್ಯಗಳು ಏಕಕಾಲದಲ್ಲಿ ಅಮ್ಮನವರು ನುಡಿಸಿಯಾಗಿತ್ತು.ಅದಕ್ಕೆ ರೀಮಿಕ್ಸ್ ಎಂಬಂತೆ ಅಯ್ಯೋ,ಅಮ್ಮಾ,ಅಪ್ಪಾ,ಅಯ್ಯಯ್ಯೋ,ಎಂಬ ನನ್ನ ಚೀರಾಟವು ಜೊತೆಗೂಡಿತ್ತು.ಹೇಗೋ ಚೇತರಿಸಿಕೊಂಡು ಹೇಗೊ ಮುಗಿಯಿತಲ್ಲ ಬಿಡು ಎಂದು ನಿಟ್ಟುಸಿರು ಬಿಡುವಷ್ಟರಲ್ಲೆ ನಿಮ್ಮಪ್ಪ ಬರ್ತಾರೆ ಇರು ನಿಂಗಿದೆ ಎಂದಾಗ ಮತ್ತೋದು ತಲೆನೋವು ಪ್ರಾರಂಭವಾಯಿತು.ಊಟ ಮುಗಿಸಿ ರಗ್ಗನ್ನು ಹೊದ್ದು ಆ ಹಳ್ಳಿಯ ಮಧುರ ಕ್ಷಣಗಳನ್ನು ಮೆಲುಕುಹಾಕುತ್ತಾ ನನಗರಿಯದಂತೆಯೆ ನಿದ್ರಾದೇವಿಯ ಮಡಿಲಿಗೆ ಶರಣಾದೆ.
ಕೆ.ಬಾಲಾಜಿ.
ಶಿಕ್ಷಕರು,ಕವಿಗಳು,ಬರಹಗಾರರು
ಚಿಂತಾಮಣಿ.
superrrrrrrrrrrrrrrrrrrrrrrrrrr
ReplyDelete